ತೊಂಗಲುಗಳು ಮತ್ತು ತುಂಗಲುಗಳು -
ಸುಣ್ಣಶಿಲೆಯ ಗುಹೆಗಳಲ್ಲಿ ಕ್ಯಾಲ್ಸಿಯಮ್ ಕಾರ್ಬೊನೇಟ್ ಮಿಶ್ರಿತ ನೀರು ಜಿನುಗುವಾಗ ಅದು ಆವಿಯಾಗಿ ಯುಗಯುಗಾಂತರಗಳ ಅವಧಿಯಲ್ಲಿ ಮೈದೆಳೆದ ವಿವಿಧ ಬಗೆಯ ರಚನೆಗಳು (ಸ್ಟಾಲಕ್‍ಟೈಟ್ಸ್ ಅಂಡ್ ಸ್ಟಾಲಗ್‍ಮೈಟ್ಸ್). ಸ್ಥಲಾಕಗಳು ಮತ್ತು ಸ್ಥಲಗ್ಮಗಳು ಪರ್ಯಾಯನಾಮಗಳು. ತೊಂಗಲುಗಳು (ತೂಗು ತೊಂಗಲುಗಳು ಎಂದೂ ಹೇಳುವುದುಂಟು) ಗುಹೆಗಳ ಚತ್ತುವಿನಿಂದ ಕೆಳಮೊಗವಾಗಿ ಬೆಳೆಯುವುವು. ಇವು ಸಹಜವಾಗಿ ತೆಳು ನೀಳವಾಗಿದ್ದು ಒಳಗೆ ಟೊಳ್ಳಾಗಿರುತ್ತವೆ. ಈ ಟೊಳ್ಳಿನ ಮುಖಾಂತರ ನೀರು ಕೆಳಕ್ಕೆ ಒಸರಿ ತಳದಲ್ಲಿ ಹೊರಸಾಗುತ್ತಿದ್ದಂತೆ ಅದರಲ್ಲಿದ್ದ ರಾಸಾಯನಿಕಾಂಶಗಳು ಅಲ್ಲೇ ಹೊಸ ಪೊರೆಗಳಾಗಿ ಹದಿಗಟ್ಟುವುವು. ಈ ತೆರನಾಗಿ ತೊಂಗಲಿನ ಉದ್ದ ಹೆಚ್ಚುತ್ತಹೋಗುವುದು. ಒಂದು ಕೇಂದ್ರದ ಸುತ್ತ ಏಕಕೇಂದ್ರಿಯ ಪಟ್ಟಿಗಳಾಗಿ ತೊಂಗಲುಗಳು ಬೆಳೆಯುತ್ತವೆ. 

ತುಂಗಲುಗಳು (ನೆಲ ತೊಂಗಲುಗಳು ಎಂದೂ ಹೇಳುವುದುಂಟು) ನೆಲದಿಂದ ಮೇಲುಮೊಗವಾಗಿ ಬೆಳೆಯುವುವು. ಸಾಧಾರಣವಾಗಿ ಇವನ್ನು ತೊಂಗಲುಗಳ ಕೆಳಗಡೆ ಕಾಣಬಹುದು. ತೊಂಗಲುಗಳನ್ನು ನಿರ್ಮಿಸುವ ಅದೇ ನೀರಿನ ತೊಟ್ಟುಗಳ ಬಾಷ್ಪೀಭವನದಿಂದ ತುಂಗಲುಗಳು ಮೈದೆಳೆಯುವುವು. ಇವು ತೊಂಗಲುಗಳಿಗಿಂತ ದಪ್ಪ ಹಾಗೂ ಗಿಡ್ಡವಾಗಿವೆ. ಕೇಂದ್ರೀಯ ಟೊಳ್ಳು ಇವುಗಳಲ್ಲಿ ಇಲ್ಲ. ತುಂಗಲಿನ ಪ್ರತಿಯೊಂದು ಪಟ್ಟಿಯೂ ಅವಸಾದಿತವಾಗುವ ತಲಕ್ಕೆ ಸಮಾಂತರವಾಗಿರುವುದು. (ನೋಡಿ- ಗುಹೆ)

ತೊಂಗಲು ಮತ್ತು ತುಂಗಲು ಎರಡನ್ನೂ ಡ್ರಿಪ್‍ಸ್ಟೋನ್ (ತೊಟ್ಟಿಕ್ಕುವ ಕಲ್ಲು) ಎಂಬ ಒಂದೇ ಹೆಸರಿನಿಂದ ಕರೆಯುವುದುಂಟು. ಇದರಲ್ಲಿ ಕ್ಯಾಲ್ಸಿಯಮ್ ಕಾರ್ಬೊನೇಟ್ ಖನಿಜ ಪ್ರಧಾನವಾಗಿರುವುದು ಕಂಡುಬರುತ್ತದೆ. ಈ ಡ್ರಿಪ್‍ಸ್ಟೋನ್ ಜೊತೆಗೆ ಇನ್ನೂ ಅನೇಕ ವಿಧವಾದ ಚಿತ್ರವಿಚಿತ್ರಾಕಾರಗಳುಳ್ಳ ಅತಿ ಸುಂದರ ಮತ್ತು ಆಕರ್ಷಕವಾದ ರಚನೆಗಳನ್ನು ಸುಣ್ಣಶಿಲೆ ಅಥವಾ ಮೆಗ್ನೀಸಿಯಮ್ ಸುಣ್ಣಶಿಲೆಗಳುಳ್ಳ (ಡಾಲೋಮೈಟ್) ಗುಹೆಗಳಲ್ಲಿ ಕಾಣಬಹುದು. ಕ್ಯಾಲ್ಸಿಯಮ್ ಕಾರ್ಬೊನೇಟ್ ಜೊತೆಗೆ ಇನ್ನೂ ಇತರ ಕಾರ್ಬೊನೇಟುಗಳೂ ಬೆಣಚು ಗುಂಪಿಗೆ ಸೇರಿದ ಓಪಾಲ್, ಚಾಲ್ಸಿಡನಿ ಕಬ್ಬಿಣದ ಗುಂಪಿಗೆ ಸೇರಿದ ಲಿಮೋನೈಟ್ ಇತ್ಯಾದಿಗಳೂ ಪಾಲ್ಗೊಳ್ಳುತ್ತವೆ. ಡ್ರಿಪ್‍ಸ್ಟೋನ್ ರಚನೆಗೆ ಪೂರಕವಾಗಿರುವ ಸನ್ನಿವೇಶಗಳು ಈ ಕೆಳಗಿನಂತಿವೆ: ಮೊತ್ತಮೊದಲನೆಯದಾಗಿ ಡ್ರಿಪ್‍ಸ್ಟೋನ್ ನಿರ್ಮಾಣಕ್ಕೆ ಅತ್ಯಗತ್ಯವಾದ ಶಿಲೆಗಳು ಗುಹೆಯ ಚಾವಣಿಯಲ್ಲಿ ಇರಬೇಕು. ಎರಡನೆಯದಾಗಿ, ಮಳೆ ನೀರು ಭೂಮಿಯೊಳಕ್ಕೆ ಒಸರುತ್ತಿರಬೇಕು. ಮೂರನೆಯದಾಗಿ, ಕಾರ್ಬನ್ ಡೈ ಆಕ್ಸೈಡ್ ಸಂಯೋಗದಿಂದಿರುವ ಅಂತರ್ಜಲದಲ್ಲಿ ನಿಧಾನವಾಗಿ ತೊಟ್ಟಿಕ್ಕಲು ಸಾಧ್ಯವಾಗುವಂತೆ ಗುಹೆಯಲ್ಲಿ ಭದ್ರವಾದ ಹಾಗೂ ನೇರವಾದ ಮಾರ್ಗಗಳಿರಬೇಕು. ಕೊನೆಯದಾಗಿ, ಹರಿಯುವ ಅಂತರ್ಜಲದಲ್ಲಿ ಸಂಯೋಗವಾದ ಇಂಗಾಲದ ಡೈಆಕ್ಸೈಡ್ ಭಾಗಶಃ ಅಥವಾ ಪೂರ್ತಿಯಾಗಿ ಆವಿಯಾಗುವುದರಿದಂದ ನೀರಿಗೆ ಖನಿಜಗಳನ್ನು ವಿಲೀನಗೊಳಿಸುವ ತ್ರಾಣ ಕುಂದುತ್ತದೆ. ಆಗ ಅದು ತನ್ನಲ್ಲಿ ಅಡಗಿಸಿಕೊಂಡಿದ್ದ ಸುಣ್ಣ ಪದಾರ್ಥಗಳನ್ನು ಹೊರಗೆಡಹುತ್ತದೆ. ಈ ಪ್ರಕ್ರಿಯೆ ಸಮರ್ಪಕವಾಗಿ ನೆರವೇರಲು ಗುಹೆಯಲ್ಲಿ ಸರಾಗವಾದ ವಾಯುಸಂಚಾರ ಇರಬೇಕು ಈ ಎಲ್ಲ ಸನ್ನಿವೇಶಗಳೂ ಸರಿಯಾಗಿದ್ದರೆ ಮಾತ್ರ ತೊಂಗಲುಗಳು ಹಾಗೂ ತುಂಗಲುಗಳು ರೂಪುಗೊಳ್ಳಲು ಸಾಧ್ಯ.

ಇದಲ್ಲದೆ, ಸಿಮೆಂಟ್  ಸೇತುವೆಗಳ ಮತ್ತು ಕಮಾನುಗಳ ಕೆಳಗೂ ಕಾಂಕ್ರಿಟ್‍ನಿಂದ ನಿರ್ಮಿಸಿದ ಸುರಂಗಗಳ ಚಾವಣಿಯಿಂದಲೂ ನೆಲದಡಿ ಹಾದಿಗಳ ಚಾವಣಿಗಳಿಂದಲೂ ಅಪೂರ್ಣವಾದ ಸಣ್ಣಪುಟ್ಟ ಇಳಿಬಿದ್ದಿರುವ ತೊಂಗಲುಗಳನ್ನು ಕಾಣಬಹುದು. ಆಗಾಗ ಅಲ್ಲಿ ಬೀಸುವ ಗಾಳಿ ಮತ್ತು ವಾಹನಗಳ ಸಂಚಾರದಿಂದ ಅವು ಆಯಾ ದಿಕ್ಕಿಗೇ ಬಾಗುವುದನ್ನೂ ಗಮನಿಸಬಹುದು. 

ಕಾಲಕ್ರಮದಲ್ಲಿ ತೊಂಗಲುಗಳು ವಿಚಿತ್ರಾಕಾರಗಳನ್ನು ತಳೆಯುತ್ತವೆ. ಉದಾಹರಣೆಗೆ ಆಲದಮರದ ಬೀಳಲಿನಂತೆ, ದ್ರಾಕ್ಷಿಗೊಂಚಲಿನಂತೆ ಅಥವಾ ಅಂದವಾದ ನೆರಿಗೆಗಳಂತೆಯೂ ಕಾಣಿಸಿಕೊಳ್ಳುವುದುಂಟು. ಇವಲ್ಲದೆ ಕ್ಯಾರೆಟ್ ಮಾದರಿಯ ತೊಂಗಲುಗಳು ತೀರ ಸಾಮಾನ್ಯ. ತೊಂಗಲಿನ ಮೇಲ್ಭಾಗ ಬೀಟ್‍ರೂಟ್ ಅಥವಾ ಟರ್‍ನಿಪ್ ಗೆಡ್ಡೆಯಂತೆ ಸಹ ಇರಬಹುದು. ಒಮ್ಮೊಮ್ಮೆ ಬಲು ಸಮೀಪದ ತೊಂಗಲುಗಳು ಮತ್ತು ತುಂಗಲುಗಳು ಒಂದನ್ನೊಂದು ನಿಕಟವಾಗಿ ಸಂಪರ್ಕಿಸುವುದರಿಂದ ಅತಿ ತೊಡಕಾದ ರಚನೆಗಳಾಗುವುವು. ಪ್ರತಿ ತೊಂಗಲಿನ ಕೆಳಗೂ ತುಂಗಲು ಇರಲೇಬೇಕೆಂದೇನೂ ಇಲ್ಲ. ಒಮ್ಮೊಮ್ಮೆ ತೊಂಗಲು ಮತ್ತು ತುಂಗಲುಗಳು ಏಕಕಾಲದಲ್ಲಿ  ಬೆಳೆಯುತ್ತ ಕ್ರಮೇಣ ಒಂದನ್ನೊಂದು ಸಂಪರ್ಕಿಸುವುದರಿಂದ ಸ್ತಂಭಾಕಾರದ ರಚನೆ ಆಗುವುದುಂಟು. ಒಟ್ಟಿನಲ್ಲಿ ಹೇಳುವುದಾದರೆ, ಇವು ಪ್ರಕೃತಿಯ ಕಲಾಮಂದಿರದಲ್ಲಿ  ಕಂಡುಬರುವ  ಅದ್ಭುತ ಆಕೃತಿಗಳಾಗಿದ್ದು ಸಹಸ್ರಾರು ಮಂದಿ ಕಲೋಪಾಸಕರನ್ನೂ ಭೂವಿe್ಞÁನಿಗಳನ್ನೂ ಆಕರ್ಷಿಸುತ್ತವೆ.

ತೊಂಗಲುಗಳು ಮತ್ತು ತುಂಗಲುಗಳನ್ನು ಒಳಗೊಂಡಿರುವ ಕೆಲವು ಮುಖ್ಯವಾದ ಗುಹೆಗಳ ಹೆಸರುಗಳು ಹೀಗಿವೆ: ನ್ಯೂ ಮೆಕ್ಸಿಕೋದಲ್ಲಿನ ಕಾಲ್ರ್ಸ್ ಬಾಡ್ ಗುಹೆಯ ಅತಿ ಸುಂದರವಾದ ರಾಜನ ಸಭಾಮಂದಿರ; ಆಂಧ್ರಪ್ರದೇಶದ ಕೋನಾರಾಮೇಶ್ವರಿ ಎಂಬ ಸ್ಥಳದಲ್ಲಿರುವ ಗುಹೆಗಳು, ಕರ್ನಾಟಕದ ದಾಂಡೇಲಿಯಲ್ಲಿರುವ ಕವಳ ಗುಹೆಗಳು, ಪ್ರಖ್ಯಾತವಾದ ಉಳವಿ ಕ್ಷೇತ್ರದ ಸಮೀಪದಲ್ಲಿರುವ ಆಕಳಗವಿ. 							(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ